ಇರ್ವಿನ್, ಲಾರ್ಡ್

 ಬ್ರಿಟನ್ನಿನ ರಾಜಕಾರಣಿ, ಬ್ರಿಟಿಷ್ ಭಾರತದ ಗೌರ್ನರ್-ಜನರಲ್ಲರಲ್ಲೊಬ್ಬ, ಜನನ, 1881. ತಂದೆ ವೈಕೌಂಟ್ ಹ್ಯಾಲಿಫಾಕ್ಸ್ II. ವಿದ್ಯಾಭ್ಯಾಸ ಈಟನ್ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ. 1903ರಲ್ಲಿ ಆಲ್ ಸೋಲ್ಸ್ ಕಾಲೇಜಿನ ಫೆಲೊ ಆಗಿ ಚುನಾಯಿತನಾದ. 1910ರಲ್ಲಿ ಸಂಪ್ರದಾಯ ಪಕ್ಷದ ಸದಸ್ಯನಾಗಿ ಪಾರ್ಲಿಮೆಂಟಿಗೆ ಆಯ್ಕೆಯಾದ. 1925ರ ವರೆಗೆ ಪಾರ್ಲಿಮೆಂಟಿನ ಸದಸ್ಯನಾಗಿದ್ದ. ಮೊದಲನೆಯ ಮಹಾಯುದ್ಧದ ಕಾಲದಲ್ಲಿ 1915-1917ರಲ್ಲಿ ಫ್ರಾನ್ಸ್ ದೇಶದಲ್ಲಿ ಇಂಗ್ಲೆಂಡಿನ ಸೈನ್ಯತುಕಡಿಯ ನಾಯಕನಾಗಿಯೂ 1916-1918ರಲ್ಲಿ ನ್ಯಾಷನಲ್ ಸರ್ವಿಸ್ ಶಾಖೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ. 1921ರಲ್ಲಿ ವಸಾಹತು ಮಂತ್ರಿಶಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡ. ಅನಂತರ ವಸಾಹತುಗಳಲ್ಲಿ ಸಂಚರಿಸಿ ಅಲ್ಲಿನ ಆಡಳಿತ ಮತ್ತು ಆರ್ಥಿಕ ಸಮಸ್ಯೆಗಳನ್ನೂ ಅವುಗಳ ಪರಿಹಾರವನ್ನೂ ಕುರಿತ ವರದಿ ಪ್ರಕಟಿಸಿದ. 1922-1924ರಲ್ಲಿ ವಿದ್ಯಾಮಂಡಲಿಯ ಅಧ್ಯಕ್ಷನಾಗಿದ್ದ ಮೇಲೆ ಈತನಿಗೆ 1924ರಲ್ಲಿ ಬ್ರಿಟನ್ನಿನ ಬಾಲ್ಡ್‍ವಿನ್ ಸಂಪುಟದಲ್ಲಿ ವ್ಯವಸಾಯ ಮತ್ತು ಮೀನುಗಾರಿಕೆ ಶಾಖೆಗಳ ಸಚಿವಸ್ಥಾನ ದೊರಕಿತು.

	1925ರ ಅಕ್ಟೋಬರ್ ತಿಂಗಳಲ್ಲಿ ಈತ ಭಾರತದ ಗೌರ್ನರ್ ಜನರಲ್ ಆದ. ಇರ್ವಿನ್ ಭಾರತದಲ್ಲಿದ್ದಾಗ ಹಲವಾರು ಕ್ಲಿಷ್ಟ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಭಾರತದ ರಾಜಕೀಯ ಸುಧಾರಣೆಗಳನ್ನೂ 1927ರಲ್ಲಿ ರಚಿತವಾಗಿ, ಕೇವಲ ಬಿಳಿಯರಿಂದಲೇ ಕೂಡಿದ್ದ ಸೈಮನ್ ಸಮಿತಿಯನ್ನೂ ಭಾರತೀಯರು ವಿರೋಧಿಸಿದರು. ದೇಶಾದ್ಯಂತ ಹರತಾಳ ಮತ್ತು ವಿಧ್ವಂಸಕ ಕೃತ್ಯಗಳು ಸಂಭವಿಸಿದವು. 1928ರ ಡಿಸೆಂಬರಿನಲ್ಲಿ ಕಾಂಗ್ರೆಸ್ ಸಮಿತಿ ಕಲ್ಕತ್ತೆಯಲ್ಲಿ ಸಭೆ ಸೇರಿ, ಬ್ರಿಟಿಷ್ ಸರ್ಕಾರ ಭಾರತೀಯರಿಗೆ ಅಧಿಕಾರ ವಹಿಸಿಕೊಡಬೇಕೆಂದು ಆಗ್ರಹಪಡಿಸಿತು. ಅಂತೆಯೇ ಸರ್ಕಾರ 1929ರ ಅಕ್ಟೋಬರಿನಲ್ಲಿ ಒಂದು ಹೇಳಿಕೆ ಹೊರಡಿಸಿ, ಭಾರತೀಯರಿಗೆ ಅಧಿಕಾರವಕಾಶ ಕಲ್ಪಿಸುವ ಆಕಾಂಕ್ಷೆ ತನಗೆ ಇದೆ ಎಂಬುದನ್ನು ಪ್ರಕಟಿಸಿತು. ಇಂಥ ಹೇಳಿಕೆಯಿಂದಲೇ ಭಾರತೀಯ ನಾಯಕರನ್ನು ತೃಪ್ತಗೊಳಿಸಲಾಗಲಿಲ್ಲ. ಭಾರತ ಸಂಪೂರ್ಣವಾಗಿ ಸ್ವತಂತ್ರವಾಗಬೇಕೆಂದು 1930ರ ಡಿಸೆಂಬರಿನಲ್ಲಿ ಲಾಹೋರಿನಲ್ಲಿ ಸೇರಿದ್ದ ಕಾಂಗ್ರೆಸ್ ಸಮಿತಿ ಸಭೆಯ ಘೋಷಣೆ ಹೊರಬಂತು. 1930ರ ಜನವರಿ 26ರಂದು ದೇಶದಲ್ಲಿ ಅಸಹಕಾರ ಚಳವಳಿ ಪ್ರಾರಂಭವಾಯಿತು. ಮಹಾತ್ಮ ಗಾಂಧಿಯವರೇ ಇದರ ನಾಯಕತ್ವ ವಹಿಸಿದರು. ಈ ಆಂದೋಳನದಲ್ಲಿ ಸಾವಿರಾರು ಮಂದಿಯನ್ನು ಬಂಧಿಸಿ ಶಿಕ್ಷಿಸಲಾಯಿತು. ಅನೇಕರು ಆಸ್ತಿಪಾಸ್ತಿಗಳನ್ನು ಕಳೆದುಕೊಂಡರು. ಸೈಮನ್ ಸಮಿತಿಯ ವರದಿಯ ಪ್ರಕಾರ 1930ರಲ್ಲಿ ಲಂಡನ್ನಿನಲ್ಲಿ ಮೊದಲನೆಯ ದುಂಡುಮೇಜಿನ ಪರಿಷತ್ತು ಸಭೆ ಸೇರಿತು. ಆದರೆ ಕಾಂಗ್ರೆಸ್ಸಿನ ಗೈರುಹಾಜರಿಯಿಂದಾಗಿ ಈ ಸಭೆಯಲ್ಲಿ ಯಾವ ಖಚಿತ ತೀರ್ಮಾನವನ್ನೂ ಕೈಗೊಳ್ಳಲಾಗಲಿಲ್ಲ. ಕೊನೆಗೆ ಸಪ್ರು ಹಾಗೂ ಜಯಕರರ ಯತ್ನದ ಫಲವಾಗಿ 1931ರಲ್ಲಿ ಗಾಂಧಿ-ಇರ್ವಿನ್ ಒಪ್ಪಂದವಾಯಿತು. ಅನಂತರ ಗಾಂಧಿಯವರು ಭಾರತೀಯ ಕಾಂಗ್ರೆಸ್ಸಿನ ಪ್ರಮುಖ ಪ್ರತಿನಿಧಿಯಾಗಿ ಇಂಗ್ಲೆಂಡಿನ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದರು. ರಾಜಕೀಯ ವಿಷಯವಾಗಿ ಜಿe್ಞÁಸೆಗಳಿದ್ದರೂ ಗಾಂಧಿ-ಇರ್ವಿನ್ನರ ಮಧ್ಯೆ ಒಳ್ಳೆಯ ಮೈತ್ರಿಯಿತ್ತು.

	ಲಾರ್ಡ್ ಇರ್ವಿನ್ ಶ್ರೇಷ್ಠ ಆಡಳಿತಗಾರ ಮತ್ತು ಮುತ್ಸದ್ದಿಯೆಂದು ಹಲವು ಚರಿತ್ರಕಾರರ ಅಭಿಪ್ರಾಯ. ದೌರ್ಬಲ್ಯದಿಂದಿರುವವನ ದಮನನೀತಿಯನನ್ನುಸರಿಸಿದನೆಂದು ಮತ್ತೆ ಕೆಲವು ಚರಿತ್ರಕಾರರ ಮತ. ತನ್ನ ತಂದೆಯಂತೆ ಈತನೂ ಧಾರ್ಮಿಕ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದನೆಂಬುದಂತೂ ಸತ್ಯ. 
(ಕೆ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ